ತುಮಕೂರು: ಮಾನಸಿಕ ಅಸ್ವಸ್ಥ ತಾಯಿ ತನ್ನ ಹೆತ್ತ ಮಗಳನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಬನಶಂಕರಿ ಬಳಿಯ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ತನ್ವಿತ (6) ಎಂಬ ಬಾಲಕಿಯೇ ಹೆತ್ತ ತಾಯಿಯಿಂದ ಕೊಲೆಯಾಗಿರುವ ದುರ್ದೈವಿ ಮಗು. ಮಗುವನ್ನು ಕೊಲೆ ಮಾಡಿರುವ ತಾಯಿ ಹೇಮಲತಾ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು, ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಮೃತ ಮಗುವಿನ ತಂದೆ ಗುಬ್ಬಿ ತಾಲ್ಲಲೂಕಿನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ಇಂದು ಕೆಲಸಕ್ಕೆ ತೆರಳಿದ್ದಾರೆ.
ಗಂಡ ಕೆಲಸಕ್ಕೆ ಹೋದ ಬಳಿಕ ತನ್ನ ಮಗುವನ್ನು ಕೊಲೆ ಮಾಡಿರುವ ತಾಯಿಯೇ ಗಂಡನಿಗೆ ಶೀಘ್ರ ಬರುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಶಿಕ್ಷಕ ಕುಮಾರ್ ಸ್ನೇಹಿತರನ್ನು ಮನೆಗೆ ಕಳುಹಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಪುಟ್ಟ ಮಗುವಿನ ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮನೆಯ ಮುಂದೆ ಜಮಾಯಿಸಿ ಮರುಗಿದ ದೃಶ್ಯ ಕಂಡು ಬಂದಿತು.
ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಜಯನಗರ ಪೊಲೀಸರು ತಾಯಿಯಿಂದ ಕೊಲೆಯಾಗಿದ್ದ ಬಾಲಕಿಯ ಶವವನ್ನು ಕಂಡು ಮಗ್ಗುಲ ಮರುಗಿದ ದೃಶ್ಯ ನೋಡುಗರ ಮನ ಕಲಕುವಂತಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಗಳನ್ನೇ ಕೊಂದ ತಾಯಿ
Leave a comment