ತಿಪಟೂರು: ಪಾತ್ರೆ ತೊಳೆದ ನೀರು ಮನೆ ಮುಂದೆ ಹರಿದು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಬಸವಯ್ಯ ಎಂಬುವರ ಪುತ್ರ ವಸಂತಕುಮಾರ್ (24) ಎಂಬಾತನೆ ಕೊಲೆಯಾಗಿರುವ ದುರ್ದೈವಿ.
ಜಯಮ್ಮ ಎಂಬುವರು ಪಾತ್ರೆ ತೊಳೆಯುತ್ತಿರುವಾಗ ಪಕ್ಕದ ಮನೆಯ ಬಸವಲಿಂಗಯ್ಯ ನೀವು ಪಾತ್ರೆ ತೊಳೆಯುತ್ತಿರುವ ನೀರು ನಮ್ಮ ಮನೆ ಮುಂದೆ ಹರಿಯುತ್ತಿದೆ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ.
ಆಗ ಶಿವಬಸವಯ್ಯ ಮತ್ತು ಬಸವಲಿಂಗಯ್ಯ ಎಂಬುವರ ಕುಟುಂಬದ ನಡುವೆ ನೀರು ಹರಿದು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಗಲಾಟೆ ವೇಳೆ ಬಸವಲಿಂಗಯ್ಯನ ಕಡೆಯವರು ಶಿವಬಸವಯ್ಯ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಎರಡೂ ಕುಟುಂಬದವರು ಆಕ್ರೋಶ ಭರಿತರಾಗಿ ಜಗಳವಾಡುತ್ತಿದ್ದಾಗ ಬಸವಲಿಂಗಯ್ಯನ ಕಡೆಯವರು ವಸಂತಕುಮಾರ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ತಿಪಟೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂರು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ವಸಂತಕುಮಾರ್ ಅಸುನೀಗಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ನೊಣವಿನಕೆರೆ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಯುವಕನ ಕೊಲೆಗೆ ಕಾರಣಾಗಿರುವ ಬಸವಲಿಂಗಯ್ಯ, ಕುಮಾರ್, ವಿಜಯ್ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
2 ಕುಟುಂಬಗಳ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
Leave a comment